ಜೀರ್ಣನಾಳ -
	ಜಠರ, ಕರುಳು ಮತ್ತು ಜೀರ್ಣಕ್ರಿಯೆಗೆ ಸಂಬಂಧ ಪಟ್ಟ ಇತರ ಆನುಷಂಗಿಕಾಂಗಗಳ ಒಟ್ಟು ಹೆಸರು (ಗ್ಯಾಸ್ಟ್ರೋಇನ್‍ಟೆಸ್‍ಟೈನಲ್ ಟ್ರ್ಯಾಕ್ಟ್). ಇದು ಬಾಯಿಯಲ್ಲಿ ಆರಂಭವಾಗಿ ಗುದದ್ವಾರದಲ್ಲಿ ಅಂತ್ಯಗೊಳ್ಳುತ್ತದೆ. ಆಹಾರದ ಪಚನ, ರಕ್ತಕ್ಕೆ ವರ್ಗಾವಣೆ ಮತ್ತು ಅಸ್ವೀಕೃತಾಂಶಗÀಳ ಉಚ್ಛಾಟನೆ ಇದರ ಕ್ರಿಯೆ. ಯಾಂತ್ರಿಕ ಹಾಗೂ ರಾಸಾಯನಿಕ ಕ್ರಿಯೆಗÀಳ ಸಮ್ಮಿಶ್ರವಿದು. ಅಗಿಯುವುದು, ಸಿಗಿಯುವುದು, ನುಚ್ಚುನುರಿ ಮಾಡುವುದು, ನಾದುವುದು, ಕಡೆಯುವುದು, ಮುಂದುಮುಂದಕ್ಕೆ ಸಾಗಿಸುತ್ತ ಅಂತ್ಯವಾಗಿ ವಿಸರ್ಜಿಸುವುದು-ಇವೆಲ್ಲ ಯಾಂತ್ರಿಕ ಕ್ರಿಯೆಗಳು. ಇವುಗಳೊಂದಿಗೆ ಜೀರ್ಣರಸಗಳಿಂದ ಆಹಾರದ ತುಣುಕುಗಳ ಪರಿವರ್ತನೆಯೂ ನಡೆಯುವುದು. ಇದು ರಾಸಾಯನಿಕ ಕ್ರಿಯೆ. ಪಚನಕ್ರಿಯೆಯ ಆರಂಭ ಬಾಯಿಯಲ್ಲಿ. ವ್ಯಕ್ತಿ ಸ್ವೀಕರಿಸಿದ ಆಹಾರ ಅಲ್ಲಿ ತುತ್ತಾಗಿ ಮಾರ್ಪಡುತ್ತದೆ. ಅವನು ಅದನ್ನು ನುಂಗಿದಾಗ ಗಂಟಲು ಮತ್ತು ಅನ್ನನಾಳಗಳ ಮೂಲಕ ಅದು ಜಠರವನ್ನು ಸೇರುತ್ತದೆ. ಅಲ್ಲಿ ಇನ್ನಷ್ಟು ಪಚನಗೊಂಡ ಆಹಾರ ಮುಂದೆ ಚಿಕ್ಕ ಕರುಳನ್ನು ತಲುಪುವುದು. ಇಲ್ಲಿ ಪಚನ ಪೂರ್ಣಗೊಂಡು ಪೌಷ್ಟಿಕಾಂಶಗಳು ರಕ್ತಗತವಾಗುವುವು. ಮುಂದಕ್ಕೆ ಆಹಾರದ ಅಸ್ವೀಕೃತಾಂಶ ಮಾತ್ರ ದೊಡ್ಡ ಕರುಳಿಗೆ ಸಾಗಿ ಅಲ್ಲಿ ಸಂಗ್ರಹಗೊಳ್ಳುತ್ತದೆ. ಬಳಿಕ ಯುಕ್ತವೇಳೆಯಲ್ಲಿ ಅದು ಗುದದ್ವಾರದ ಮೂಲಕ ಮಲವಾಗಿ ವಿಸರ್ಜಿತವಾಗುವುದು. ಪಚನಕ್ರಿಯೆಯಲ್ಲಿ ಭಾಗಿಯಾಗುವ ಇತರ ಅಂಗಗಳೆಂದರೆ ಹಲ್ಲುಗಳು, ಲಾಲಾಗ್ರಂಥಿಗಳು, ಯಕೃತ್ತು (ಲಿವರ್) ಮತ್ತು ಮೇದೋಜೀರಕಾಂಗ (ಪ್ಯಾಂಕ್ರಿಯಾಸ್). ಇವೆಲ್ಲವೂ ಜೀರ್ಣನಾಳದ ಉಪಾಂಗಗಳು.

	ಬಾಯಿ : ಹೊರಭಾಗದಲ್ಲಿ ಕೆನ್ನೆಗಳ ಮತ್ತು ತುಟಿಗಳ ಆವರಣದಿಂದ ಉಂಟಾಗಿರುವ ಡೊಗರು. ಇದರ ಛಾವಣಿಗೆ ಬಾಯಿಯ ಅಟ್ಟ ಎಂದು ಹೆಸರು. ಇದು ಬಾಯಿಯನ್ನು ನಾಸಿಕ ಪೊಳ್ಳು ಭಾಗದಿಂದ ಪ್ರತ್ಯೇಕಿಸುವುದು. ಬಾಯಿಯ ನೆಲಪ್ರದೇಶದ ಹೆಚ್ಚು ಭಾಗವನ್ನು ನಾಲಗೆ ಆಕ್ರಮಿಸಿದೆ. ಬಾಯಿಯಲ್ಲಿ ಎರಡು ವಿಭಾಗಗಳಿವೆ. ಒಂದು ವಿಭಾಗ ಹಲ್ಲು, ಕೆನ್ನೆ ಮತ್ತು ತುಟಿಗಳ ಮಧ್ಯೆ ಇರುವ ಪ್ರವೇಶಪ್ರದೇಶ (ವೆಸ್ಟಿಬ್ಯೂಲ್); ಇನ್ನೊಂದು ವಿಭಾಗ ಹಲ್ಲು ಮತ್ತು ವಸಡುಗಳ ಒಳಗಿರುವ ಪ್ರತ್ಯಕ್ಷ ಬಾಯಿ. ಪ್ರವೇಶ ಪ್ರದೇಶದ ಎಡಗಡೆ ಮತ್ತು ಬಲಗಡೆಗಳಲ್ಲಿ ಪೆರೊಟಿಡ್ ಎಂಬ ದೊಡ್ಡ ಲಾಲಾಗ್ರಂಥಿಗಳ ನಾಳಗಳು ತೆರೆದುಕೊಂಡಿವೆ. ನಾಲಗೆಯ ತುದಿಯ ಕೆಳಗೆಡೆ ಮಿಕ್ಕ ಲಾಲಾಗ್ರಂಥಿಗಳು ತೆರೆದುಕೊಂಡಿವೆ. ಬಾಯಿಯ ಹಿಂಭಾಗದಲ್ಲಿರುವ ದ್ವಾರ ಗಂಟಲು. ಬಾಯಿ ಮತ್ತು ಗಂಟಲು ಸೇರುವೆಡೆ ಒಂದೊಂದು ಕಡೆಯೂ ಟಾನ್ಸಿಲ್ ಎಂಬ ಎರಡು ದುಗ್ಧರಸ ಗ್ರಂಥಿಗಳಿವೆ.    (ನೋಡಿ- ಬಾಯಿ)

	ಲಾಲಾಗ್ರಂಥಿಗಳು : ದೊಡ್ಡ ಜೋಡಿ ಗ್ರಂಥಿಗಳಾದ ಪೆರೋಟಿಡ್ ಸಬ್‍ಮ್ಯಾಕ್ಸಿಲ್ಲರಿ ಮತ್ತು ಸಬ್‍ಲಿಂಗ್ವಲುಗಳೂ ನಾಲಗೆ, ತುಟಿ, ಕೆನ್ನೆ ಮತ್ತು ಅಟ್ಟದ ಲೋಳೆ ಪೊರೆಯೊಳಗೆ ಚದರಿರುವ ಅಸಂಖ್ಯಾತ ಸಣ್ಣ ಗ್ರಂಥಿಗಳೂ ಸೇರಿ ಜೊಲ್ಲು ಗ್ರಂಥಿಗಳು, ಅಥವಾ ಲಾಲಾಗ್ರಂಥಿಗಳು, ಆಗಿವೆ. ಸಸ್ತನಿಗಳಿಗೆ ಮಾತ್ರ ನಿಜವಾದ ಲಾಲಾಗ್ರಂಥಿಗಳಿರುವುದು. ಕಿವಿಯ ಮುಂದೆ ಮತ್ತು ಕೆಳಗಡೆ ಮುಖದ ಎರಡು ಪಾಶ್ರ್ವಗಳಲ್ಲೂ ಪೆರೋಟಿಡ್ ಗ್ರಂಥಿಗಳಿವೆ. ಇವುಗಳ ಆಕಾರ ಪಿರಮಿಡ್ಡಿನಂತೆ. ಒಂದೊಂದು ಗ್ರಂಥಿಯ ಸರಾಸರಿ ತೂಕ 25 ಗ್ರಾಂ ತೆಳ್ಳನೆಯ ನೀರಾದ ಲಾಲಾರಸವನ್ನು ಈ ಗ್ರಂಥಿಗಳು ಸ್ರವಿಸುತ್ತವೆ. ಊಟದ ವೇಳೆ ಈ ಸ್ರವನ ಅಧಿಕ. ಕೆಳದವಡೆಯ ಒಳಭಾಗದಲ್ಲಿ ಬಾಯಿಯ ನೆಲಪ್ರದೇಶದ ಎರಡು ಕಡೆಗಳಲ್ಲೂ ಸಬ್‍ಮ್ಯಾಕ್ಸಿಲ್ಲರಿ ಗ್ರಂಥಿಗಳಿವೆ. ಇವುಗಳ ಆಕಾರ ಚಪ್ಪಟೆಯಾದ ಹಿಪ್ಪೆ ಬೀಜದಂತೆ. ಒಂದೊಂದು ಗ್ರಂಥಿಯ ಸರಾಸರಿ ತೂಕ 9 ಗ್ರಾಂ. ಮಂದವಾದ ಲಾಲಾರಸವನ್ನು ಈ ಗ್ರಂಥಿಗಳು ಸ್ರವಿಸುತ್ತವೆ. ಇದು ಸುಲಭವಾಗಿ ಘನೀಭವಿಸಬಲ್ಲುದು. ಆದ್ದರಿಂದ ಈ ಗ್ರಂಥಿಯಲ್ಲಿ ಮಣಿರಚನೆ ಸಾಮಾನ್ಯ. ನಾಲಗೆಯ ಕೆಳಭಾಗದ ಇಕ್ಕೆಲಗಳಲ್ಲಿ ಸಬ್‍ಲಿಂಗ್ವಲ್ (ನಾಲಗೆ ಕೆಳಗಿನ) ಗ್ರಂಥಿಗಳಿವೆ. ಒಂದೊಂದು ಗ್ರಂಥಿಯ ಸರಾಸರಿ ತೂಕ 3.5 ಗ್ರಾಂ. ಇವು ಬಾಯಿಯ ನೆಲಪ್ರದೇಶದಲ್ಲಿ 8-20 ನಾಳಗಳ ಮೂಲಕ ತೆರೆದುಕೊಳ್ಳುವುವು. ಎಲ್ಲ ಲಾಲಾಗ್ರಂಥಿಗಳ ಒಟ್ಟು ಸ್ರಾವ 24 ಗಂಟೆಗಳಲ್ಲಿ 1000-1500 ಎಂ.ಎಲ್. ನಷ್ಟಿದೆ. ಈ ಸ್ರವನದಲ್ಲಿ (ಅಂದರೆ ಜೊಲ್ಲಿನಲ್ಲಿ) 99.5% ನೀರು ಮತ್ತು 0.5% ಘನಪದಾರ್ಥಗಳಿವೆ. ಇವುಗಳಲ್ಲಿ ಮುಖ್ಯವಾದವೆಂದರೆ ಜೈವಿಕ ಎನ್‍ಜೈಮ್ ಅಮೈಲೇಸ್ (ಟೈಯಲಿನ್), ಲೈಸೋಸೈಮ್ ಮತ್ತು ರಕ್ತ ಪಂಗಡದ ವಿಶೇಷ ವಸ್ತುಗಳು. ವ್ಯಕ್ತಿ ಆಹಾರವನ್ನು ಬಾಯಿಗೆ ಹಾಕಿಕೊಂಡು ಅಗಿಯಲು ತೊಡಗಿದಾಗ ಲಾಲಾರಸದ ಅಧಿಕ ಸ್ರವನ ಮತ್ತು ನಾಲಗೆಯ ಯುಕ್ತ ಚಲನೆಯಿಂದ ಯಾಂತ್ರಿಕ ಹಾಗೂ ರಾಸಾಯನಿಕ ಪಚನಕ್ರಿಯೆಗಳೆರಡೂ ಪ್ರಾರಂಭವಾಗುತ್ತವೆ. ಆಹಾರದೊಡನೆ ಬಾಯಿಯನ್ನು ಪ್ರವೇಶಿಸಿರಬಹುದಾದ ಕೆಲವು ವಿಷಾಣುಗಳು ಲೈಸೋಸೈಮಿನಿಂದ ನಿರ್ನಾಮವಾಗುವುವು. 

ಹಲ್ಲುಗಳು : ಆಹಾರದ ತುಣುಕುಗಳನ್ನು ಅರೆದು ನುಂಗಲು ಸುಲಭವಾಗುವಂತೆ ಮಾಡುವುದು ಇವುಗಳ ಪ್ರಧಾನ ಕ್ರಿಯೆ. ಮುಖಸೌಂದರ್ಯವರ್ಧನೆ, ಧ್ವನಿನಿಯಂತ್ರಣೆ ಮುಂತಾದವು ಆನುಷಂಗಿಕ ಕ್ರಿಯೆಗಳು. ಪ್ರತಿ ಹಲ್ಲಿನಲ್ಲೂ ಮೂರು ಭಾಗಗಳಿವೆ. ವಸಡಿನಿಂದ ಹೊರಗಿರುವ ಮಕುಟ ಭಾಗ, ದವಡೆಯ ತೂತಿನೊಳಗೆ ಹುದುಗಿರುವ ಬುಡಭಾಗ ಮತ್ತು ಇವೆರಡರ ಮಧ್ಯೆ ಕಿರಿದಾದ ಕಂಠಭಾಗ. ಹಲ್ಲಿನ ನಡು ಮಧ್ಯದಲ್ಲಿ ಮೃದುವಾದ ತಿರುಳೂ ಇದನ್ನು ಸುತ್ತುವರಿದು ತಿಳಿ ಹಳದಿಬಣ್ಣದ ಡೆಂಟಿನ್ನೂ ಇವೆ. ಹಲ್ಲಿನ ಗಾತ್ರ ಪ್ರಧಾನವಾಗಿ ಡೆಂಟಿನ್ನಿನಿಂದ ಆಗಿದೆ. ಇದರ ಹೊರಹೊದಿಕೆಯಾಗಿ ಮಕುಟ ಪ್ರಾಂತ್ಯದಲ್ಲಿ ಹಲ್ಲುಗಾಜು (ಎನೇಮಲ್) ಮತ್ತು ಬುಡಭಾಗದಲ್ಲಿ ಸಿಮೆಂಟ್ ಇವೆ. ಹಲ್ಲಿನ ಹೊರಪೊರೆ ಸಿಮೆಂಟನ್ನು ಆವರಿಸಿ ಹೊರಬಂದು ಕಂಠಪ್ರದೇಶದಲ್ಲಿ ವಸಡಿನ ನಾರೆಳೆ ಅಂಶದ ಜೊತೆಗೆ ಮಿಲನಗೊಳ್ಳುತ್ತದೆ. ಬುಡದ ತಳದಲ್ಲಿ ಸಿಮೆಂಟ್ ಮತ್ತು ಡೆಂಟಿನ್ನುಗಳಿಗೆ ಪೂರೈಕೆ ಆಗುವ ರಕ್ತನಾಳಗಳೂ ನರಗಳೂ ಪ್ರವೇಶಿಸುತ್ತವೆ. 

ನಾಲಗೆ : ಬಿಳಿ ಮಿಶ್ರಿತ ತಿಳಿಕೆಂಪು ಬಣ್ಣದ ಸ್ನಾಯುಯುಕ್ತ ಅಂಗವಿದು. ಇದನ್ನು ಆವರಿಸಿಕೊಂಡು ಒಳತ್ವಕ್ಜನಿತ ಲೋಳೆಪೊರೆ ಉಂಟು. ಇದರ ಮೇಲು ಭಾಗದ ಲೋಳೆಪೊರೆಯಲ್ಲಿ ಅನೇಕ ರುಚಿ ಅಂಕುರಗಳೂ ಸ್ನಾಯು ಎಳೆಗಳ ನಡುವೆ ಅನೇಕ ಲಾಲಾಗ್ರಂಥಿಗಳೂ ಸೇರಿಕೊಂಡಿವೆ. ನಾಲಗೆಯ ಮುಂದಿನ 2/3 ಭಾಗ ಮತ್ತು 1/3 ಹಿಂದಿನ ಭಾಗ ಇವು ಪರಸ್ಪರ ಸಮಾವೇಶಗೊಳ್ಳುವಲ್ಲಿ ٨ ಆಕಾರದ ಗುರುತನ್ನು ಕಾಣಬಹುದು. ನಾಲಗೆಯ ಮಧ್ಯದಲ್ಲಿ ಬುಡದಿಂದ ತುದಿಯವರೆಗೂ ಒಂದು ತಡಿಕೆ ಉಂಟು. ಇದರ ಎರಡು ಕಡೆಗಳಲ್ಲೂ ಆಂತರಿಕ ಮತ್ತು ಬಾಹ್ಯ ಸ್ನಾಯುಗಳು ನಾಲಗೆಯ ಸರ್ವತ್ರ ವ್ಯಾಪಿಸಿ ಅದಕ್ಕೆ ತೀವ್ರ ಪಟುತ್ವವನ್ನು ಒದಗಿಸಿವೆ. 		
					(ನೋಡಿ- ನಾಲಗೆ)
ಗಂಟಲು : ಬಾಯಿಗೂ ಅನ್ನನಾಳಕ್ಕೂ ನಡುವೆ 12-14 ಸೆಂ.ಮೀ. ಉದ್ದವಾಗಿರುವ, ಜೀರ್ಣನಾಳದ ಭಾಗ. ಇದರಲ್ಲಿ ಮೂರು ವಿಭಾಗಗಳಿವೆ : ಬಾಯಿಯ ಅಟ್ಟ ಮತ್ತು ಗಂಟಲಿನ ಛಾವಣಿಯ ನಡುವೆ ಇರುವ ನಾಸಿಕಕ್ಕೆ ಸೇರಿದ ವಿಭಾಗ : ಬಾಯಿಯ ಅಟ್ಟ ಮತ್ತು ಗಂಟಲಿನ ನೆಲಪ್ರದೇಶದಲ್ಲಿರುವ ಎಪಿಗ್ಲಾಟಿಸ್ ನಡುವೆ ಇರುವ ಬಾಯಿಗೆ ಸೇರಿದ ವಿಭಾಗ; ಎಪಿಗ್ಲಾಟಿಸ್ ಮತ್ತು ಅನ್ನನಾಳದ ನಡುವೆ ಇರುವ ಧ್ವನಿಪೆಟ್ಟಿಗೆಗೆ ಸೇರಿದ ವಿಭಾಗ. ನಾಲಗೆಯ ಹಿಂಭಾಗದಲ್ಲಿ ಧ್ವನಿ ಪೆಟ್ಟಿಗೆಯ ಪ್ರವೇಶ ದ್ವಾರದ ಮುಂದೆ ಸ್ವಲ್ಪ ಓರೆಯಾಗಿ ಹಿಂದಕ್ಕೂ ಮುಂದಕ್ಕೂ ಚಾಚಿಕೊಂಡಿರುವ ಮತ್ತು ಲೋಳೆಪೊರೆಯಿಂದ ಆವೃತವಾಗಿರುವ ಮೃದ್ವಸ್ಥಿಯೇ ಎಪಿಗ್ಲಾಟಿಸ್. ಬಾಯಿಯಲ್ಲಿ ಆಂಶಿಕವಾಗಿ ಪಚನಗೊಂಡ ಆಹಾರವನ್ನು ವ್ಯಕ್ತಿ ನುಂಗಿದಾಗ, ಗಂಟಲಿನಲ್ಲಿ ಸಜ್ಜಾಗಿರುವ ಮೂರು ಪ್ರಬಲ ಸ್ನಾಯುಗಳು, ಅದನ್ನು ಅನ್ನನಾಳಕ್ಕೆ ಬಲವಂತವಾಗಿ ನೂಕುತ್ತದೆ. ನುಂಗುವಿಕೆಯ ಕ್ರಿಯಾವಿನ್ಯಾಸದಲ್ಲಿ ಮೂರು ಹಂತಗಳನ್ನು ಗುರುತಿಸಬಹುದು. ಮೊದಲನೆಯದು ಐಚ್ಛಿಕ. ಇದರಲ್ಲಿ ನಾಲಗೆಯ ಮುಂತುದಿ ಬಾಯಿಯ ಅಟ್ಟವನ್ನು ಅದುಮಿ ಒತ್ತುತ್ತದೆ; ಒಂದಿಗೆ ಹಯಯ್ಡ್ ಮೂಳೆ (ನಾಲಗೆಯ ಬುಡಕ್ಕೂ ಧ್ವನಿ ಪೆಟ್ಟಿಗೆಗೂ-ಲ್ಯಾರಿಂಕ್-ನಡುವೆ ಇದೆ; ಇದು ನಾಲಗೆಗೆ ಆಧಾರವನ್ನೂ ನಾಲಗೆಯ ಹಲವಾರು ಸ್ನಾಯುಗಳಿಗೆ ಒಗ್ಗೂಡಿಕೆಯನ್ನು ಒದಗಿಸುತ್ತದೆ) ಮೇಲಕ್ಕೂ ಮುಂದಕ್ಕೂ ಚಲಿಸಿ ನಿಶ್ಚಲವಾಗುತ್ತದೆ; ಇದೇ ವೇಳೆ ನಾಲಗೆ ಅಟ್ಟಗಳ ನಡುವೆ ಸಿಕ್ಕಿಬಿದ್ದಿರುವ ತುತ್ತು, ಬಾಯಿಗೆ ಸೇರಿದ ಗಂಟಲಿನ ಭಾಗಕ್ಕೆ, ಕ್ರಮೇಣ ತಳ್ಳಲ್ಪಡುತ್ತದೆ. ಅಟ್ಟ ಚಲಿಸಿ ಮೂಗಿನೊಡನೆ ಇರುವ ಸಂಪರ್ಕವನ್ನು ತಪ್ಪಿಸುತ್ತದೆ. ಎಪಿಗ್ಲಾಟಿಸ್ ಚಲಿಸಿ ಶ್ವಾಸಮಾರ್ಗದ ದ್ವಾರವನ್ನು ಪೆಟ್ಟಿಗೆ ಮುಚ್ಚಳದಂತೆ ಮುಚ್ಚುತ್ತದೆ. ನುಂಗುವಿಕೆಯ ಉಳಿದೆರಡು ಹಂತಗಳು ಅನೈಚ್ಛಿಕ ಕ್ರಿಯೆಗಳು. ತುತ್ತು ಗಂಟಲನ್ನು ತಾಕಿದ ಕೂಡಲೇ ಗಂಟಲು ಬಾಯಿಗಳ ನಡುವೆ ಇರುವ ಕಿರಿದಾದ ಸ್ಥಳ ಮುಚ್ಚಿಕೊಳ್ಳುತ್ತದೆ.  ಅನ್ನನಾಳದ ದ್ವಾರ ತೆರೆದುಕೊಂಡು ತುತ್ತಿನ ಕೆಳಮುಖ (ಅಂದರೆ ಹೊಟ್ಟೆ ಕಡೆಗಿನ) ಚಲನೆಗೆ ಅನುಮಾಡಿಕೊಡುತ್ತದೆ. ಇವಿಷ್ಟು ಎರಡನೆಯ ಹಂತ. ಮೂರನೆಯ ಹಂತದಲ್ಲಿ ತುತ್ತು ಅನ್ನನಾಳದಲ್ಲಿ ಸಾಗಿ ಜಠರವನ್ನು ಸೇರುವುದು. ಸುಮಾರು 6-7 ಸೆಕೆಂಡುಗಳ ಅವಧಿಯಲ್ಲಿ ನುಂಗುವಿಕೆಯ ಈ ಎರಡು ಹಂತಗಳೂ ಪೂರ್ಣವಾಗುವುವು.			(ನೋಡಿ- ಗಂಟಲು)

ಅನ್ನನಾಳ : ಕುತ್ತಿಗೆಯಲ್ಲಿ (ನೆಕ್) 6ನೆಯ ಕಂಠ ಕಶೇರುಮಣಿಯ ನೇರದಲ್ಲಿ ಗಂಟಲಿಗೆ (ಫೇರಿಂಕ್ಸ್) ಲಂಬವಾಗಿ ಇದರ ಆರಂಭ; ಮುಂದೆ ಎದೆಯ ಉದ್ದಕ್ಕೂ ಸಾಗಿ ದೇಹದ ಎರಡು ಪೊಳ್ಳುಪ್ರದೇಶಗಳು, ಎದೆ ಮತ್ತು ಉದರ ಇವುಗಳ ನಡುವೆ ಇರುವ ಸ್ನಾಯುಯುಕ್ತ ಹಾಳೆಯಾದ ವಪೆಯನ್ನು ತೂರಿ ಜಠರದ ಕಾರ್ಡಿಯಕ್ ತುದಿಯಾಗಿ ಕೊನೆಗೊಳ್ಳುತ್ತದೆ. ಅನ್ನನಾಳದ ಸ್ಥಾನ ದೇಹದ ಮಧ್ಯರೇಖೆಯಿಂದ ಕೊಂಚ ಎಡಕ್ಕೆ ಸರಿದಂತೆ ಉಂಟು. ಕಂಠ ಮತ್ತು ಎದೆಯ ಕಶೇರುಮಾಲೆಯ ಡೊಂಕಿಗೆ ಅನುಸಾರವಾಗಿ ಅನ್ನನಾಳದಲ್ಲಿ ಡೊಂಕುಗಳಿವೆ. ಅಲ್ಲದೇ ಬಾಚಿಹಲ್ಲಿನಿಂದ ತೊಡಗಿ 6", 9", 11" ಮತ್ತು 16" ದೂರಗಳಲ್ಲಿ ಒಟ್ಟು ನಾಲ್ಕು ಸಂಕೀರ್ಣಗಳು (ಕನ್ಸ್‍ಟ್ರಿಕ್ಷನ್ಸ್), ಅಂದರೆ ಅವುಕಿ ಹಿಡಿದಂಥ ಸ್ಥಿತಿಗಳು ಉಂಟು. ರೋಗಪರೀಕ್ಷೆ ಮತ್ತು ಚಿಕಿತ್ಸೆಗಳಿಗಾಗಿ ಶಸ್ತ್ರಗಳನ್ನು ಪ್ರಯೋಗಿಸುವ ವೇಳೆ ಈ ಸಂಕೀರ್ಣಗಳನ್ನು ಎಚ್ಚರಿಕೆಯಿಂದ ಗಮನಿಸುವುದು ಅವಶ್ಯ. ವ್ಯಕ್ತಿ ನುಂಗಿದ ತುತ್ತಿನ ಅಂಶಗಳು ಸಂಕೀರ್ಣಗಳಲ್ಲಿ ತಡೆನಿಲ್ಲುವ ಸಂಭಾವ್ಯತೆ ಉಂಟು.

ಅನ್ನನಾಳದ ಸ್ನಾಯುವಿನಲ್ಲಿ ಎರಡು ಪದರಗಳಿವೆ. ಹೊರಭಾಗದ್ದು ಉದ್ದುದ್ದನೆಯದಾಗಿದೆ; ಒಳಭಾಗದ್ದು ವರ್ತುಳೀಯವಾಗಿದೆ. ನುಂಗಿದ ತುತ್ತು ಸಲಿಸಾಗಿ ಜಠರದೆಡೆಗೆ ಸಾಗಲು ಅನುಕೂಲತೆ ಒದಗಿಸಲೋಸ್ಕರ ಲೋಳೆಪೊರೆಗೆ ಪುಟಿತ (ಹಿಗ್ಗುವ ಮತ್ತು ಕುಗ್ಗುವ) ಗುಣ ಉಂಟು. ತೆಳು ಜೀವಕೋಶಗಳ ಹಲವಾರು ಪದರಗಳ ಜೋಡಣೆ ಈ ಲೋಳೆಪೊರೆ. ವೇಗಸ್‍ನರಗಳು ಅನ್ನನಾಳವನ್ನು ಜೊತೆಗೂಡಿಕೊಂಡೇ ಉದರವನ್ನು ತಲಪುತ್ತವೆ. 

ಜಠರ : ಜೀರ್ಣನಾಳವೇ ಗರಿಷ್ಠಗಾತ್ರಕ್ಕೆ ಹಿಗ್ಗಿ ಮೈದಳೆದಿರುವ ಅಂಗ : ಅನ್ನನಾಳ ಹಾಗೂ ಚಿಕ್ಕಕರುಳಿನ ನಡುವೆ, ಉದರದ (ಅಬ್ಡೊಮೆನ್) ಮೇಲುಭಾಗದಲ್ಲಿ ಮಧ್ಯರೇಖೆಯ ಎಡಕ್ಕೆ ಭಾಗಶಃ ಯಕೃತ್ತಿನ ಹಿಂದುಗಡೆ ನೆಲೆಸಿದೆ (ಸ್ಟೊಮಕ್). ಮಗು ಹುಟ್ಟಿದಾಗ ಜಠರದ ಘನಗಾತ್ರ 30 ಸಿಸಿ ಗೆ ಇದ್ದರೆ ಪ್ರಬುದ್ಧಾವಸ್ತೆಯಲ್ಲಿ ಅದು 1000-1500 ಸಿಸಿ ಗೆ ಹಿಗ್ಗಿರುತ್ತದೆ. ಇದರ ಸ್ಥಾನ ಮತ್ತು ಆಕಾರ ವ್ಯಕ್ತಿಯ ನಿಲುವಿನ ಮೇಲೂ (ನಿಂತಾಗ ಒಂದು ರೀತಿ, ಮಲಗಿದಾಗ ಇನ್ನೊಂದು ರೀತಿ, ಇತ್ಯಾದಿ) ಕರುಳುಗಳ ಆಯಾ ಕಾಲದ ಸ್ಥಿತಿಯ ಮೇಲೂ ಅವಲಂಬಿಸಿವೆ. ಬಹುಮಂದಿಯಲ್ಲಿ ಜಠರದ ಆಕಾರ ಎ ಯಂತಿರುವುದು. ಕೆಲಮಂದಿಯಲ್ಲಿ ಇದು ದೊಡ್ಡದಾಗಿ ಗೂಳಿಯ ಕೊಂಬಿನ ಆಕಾರದಲ್ಲಿ ಇರುವುದೂ ಉಂಟು. ವಿವರಣೆಯ ಸಲುವಾಗಿ ಇದನ್ನು ಮೂರು ವಿಭಾಗಗಳಾಗಿ ಪರಿಗಣಿಸಲಾಗಿದೆ: ಕಾರ್ಡಿಯಾಕ್ ವಿಭಾಗ 10%, ಫಂಡಸ್ ವಿಭಾಗ 75%, ಪೈಲೋರಸ್ ವಿಭಾಗ 15%. ಜಠರದ ಒಳ ಮತ್ತು ಮೇಲಿನ ಅಂಚು ನಿಮ್ನ ಮತ್ತು ಕಿರಿದು (ಕಾನ್‍ಕೇವ್ ಅಂಡ್ ಷಾರ್ಟ್); ಇದಕ್ಕೆ ಚಿಕ್ಕ ಡೊಂಕು ಎಂದು ಹೆಸರು. ಹೊರ ಅಂಚು 3-4 ಮಡಿ ಉದ್ದವಾಗಿದೆ; ಇದು ಪೀನವಾಗಿದೆ ಕೂಡ. ಇದಕ್ಕೆ ದೊಡ್ಡ ಡೊಂಕು ಎಂದು ಹೆಸರು. ಜಠರವನ್ನು ಪೂರ್ಣವಾಗಿ ಉದರದ ಒಳಪೊರೆ (ಪೆರಿಟೋನಿಯಮ್) ಆವರಿಸಿದೆ. ಇದಕ್ಕೆ ಮೂರು ಸ್ನಾಯು ತೊಡಿಕೆಗಳಿವೆ: ಹೊರ ನೀಳ, ಒಳ ಓರೆ ಮತ್ತು ನಡು ವರ್ತುಳೀಯ.

ಜಠರದ ಒಳಪೊರೆ ಮ್ಯೂಸಿನನ್ನು ಸ್ರವಿಸುವ ನೀಳ ಕೋಶಗಳ ಸರಳ ಪದರ. ಜಠರದ ಗ್ರಂಥಿಗಳು ಪ್ರರೂಪದಲ್ಲೂ (ಟೈಪ್) ಹಂಚಿಕೆಯಲ್ಲೂ ಬೇರೆ ಬೇರೆಯಾಗಿವೆ. ಕಾರ್ಡಿಯಕ್ ಹಾಗೂ ಪೈಲೋರಸ್ ವಿಭಾಗಗಳಲ್ಲಿರುವ ಗ್ರಂಥಿಗಳು ಮ್ಯೂಸಿನನ್ನು ಸ್ರವಿಸುವುವು.  ಫಂಡಸ್ ಮತ್ತು ಜಠರದ ಇತರ ಪ್ರಾಂತ್ಯದಲ್ಲಿರುವ ಗ್ರಂಥಿಗಳಲ್ಲಿ ಮೂರು ವಿಧವಾದ ಕೋಶಗಳಿವೆ. (1) ಗ್ರಂಥಿಯ ಕಂಠಭಾಗದ ಕೋಶಗಳು. ಇವು ಮ್ಯೂಸಿನನ್ನು ಸ್ರವಿಸುವುವು. (2) ಗ್ರಂಥಿಯ ಉದ್ದಕ್ಕೂ ಸಾಲಾಗಿರುವ ಕೋಶಗಳು. ಇವುಗಳಲ್ಲಿ ಸೈಮೋಜಿನ್ ಕಣಗಳಿವೆ. ಇವೇ ಜಠರಸ್ರಾವದಲ್ಲಿರುವ ಪೆಪ್ಸಿನ್ ಆಗಿ ಪರಿವರ್ತಿತವಾಗುತ್ತವೆ. ಈ ಕೋಶಗಳಿಗೆ ಪೆಪ್ಟಿಕ್ ಕೋಶಗಳೆಂದು ಹೆಸರು. (3) ಆಮ್ಲೋತ್ಪಾದಕ ಕೋಶಗಳು. ಇವು ಪೆಪ್ಟಿಕ್ ಕೋಶಗಳ ನಡುವೆ ಅಲ್ಲಲ್ಲಿ ಹೊರಚ್ಚಾದ ಮಣಿಗಳಂತೆ ಕಾಣಬರುತ್ತವೆ. ಇವು ಹೈಡ್ರೊಕ್ಲೋರಿಕ್ ಆಮ್ಲವನ್ನು ಸ್ರವಿಸುವುವು. ಇವಕ್ಕೆ ಆಕ್ಸಂಟಿಕ್ ಕೋಶಗಳೆಂದು ಹೆಸರು. ಇವಲ್ಲದೇ ಆರ್ಜೆಂಟಿಫೈನ್ ಕೋಶಗಳು ಆ ಜಠರದ ಒಳಪೊರೆಯಲ್ಲಿ ಚದರಿದಂತೆ ಹರಡಿವೆ.  ಇವುಗಳ ಕ್ರಿಯೆ ಸರಿಯಾಗಿ ತಿಳಿಯದು. ಜಠರದಲ್ಲಿ ಬಹುಸಂಖ್ಯೆಯ ರಕ್ತನಾಳಗಳಿವೆ. ನರದ ಪೂರೈಕೆ ಎರಡು ವೇಗಸ್ ನರಗಳಿಂದ ಆಗಿದೆ. ಜಠರದ ಸ್ರಾವಕ್ಕಾಗಿಯೂ ಚಲನಶೀಲತೆಗಾಗಿಯೂ ಇವು ಪ್ರಾಮುಖ್ಯ ಪಡೆದಿವೆ. ಅನುವೇದನ ನರಪೂರೈಕೆ (ಸಿಂಪತೆಟಿಕ್ ನರ್ವ್ ಸಪ್ಲೈ) ಆ5ರಿಂದ ಆ10ರ ತನಕ (ಮಿದುಳುಬಳ್ಳಿಯ ಎದೆಯ 5-10 ತುಕ್ಕಡಗಳಿಂದ) ಇರುವ ಸ್ಥಳದಿಂದ ಆಗಿದೆ. ಪೈಲೊರಿಕ್ ನಾಳದಲ್ಲಿ ಜಠರ ಅಂತ್ಯವಾಗುವುದು. ಇದರ ಭಿತ್ತಿಯಲ್ಲಿ ದಪ್ಪವಾದ ವರ್ತುಳೀಯ ಸ್ನಾಯು ಉಂಟು. ಈ ರಚನಾವಿಶೇಷದಿಂದ ಪೈಲೋರಿಕ್ ನಾಳ ಜಠರದಿಂದ ಆಹಾರದ ನಿರ್ಗಮನವನ್ನು ನಿಯಂತ್ರಿಸುತ್ತದೆ. 
ಲಾಲಾರಸದೊಂದಿಗೆ ಚರ್ವಣಗೊಂಡ ಆಹಾರ ಜಠರವನ್ನು ಪ್ರವೇಶಿಸುತ್ತದೆ. ಅಲ್ಲಿ ಜಠರಸ್ರಾವಗಳಾದ ಪೆಪ್ಸಿನ್ ಮತ್ತು ಹೈಡ್ರೊಕ್ಲೋರಿಕ್ ಆಮ್ಲ ಆಹಾರದೊಂದಿಗೆ ಸೇರಿ ಪಕ್ವಮಿಶ್ರಣವಾಗುವುದು. ವೇಗಸ್ ನರಗಳು ಮತ್ತು ಪೈಲೊರಸ್ಸಿನಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ಆದ ಗ್ಯಾಸ್ಟ್ರಿನ್ ಈ ಸ್ರವವನ್ನು ನಿಯಂತ್ರಿಸುವುವು. ಆಹಾರದಲ್ಲಿನ ಶರ್ಕರ ಮತ್ತು ಪ್ರೋಟಿನ್ ಅಂಶಗಳು ಜಠರದಲ್ಲಿ ಭಾಗಶಃ ಜೀರ್ಣವಾಗುತ್ತವೆ. ಬಳಿಕ ಪೈಲೋರಿಕ್ ಸ್ನಾಯುವಿನ ನಿಯಂತ್ರಿತ ಕ್ರಿಯೆಯ ಪರಿಣಾಮವಾಗಿ ಅವು ಚಿಕ್ಕ ಕರುಳನ್ನು ಸೇರುವುವು. ಊಟವಾದ ಸುಮಾರು 3-4 ಗಂಟೆಗಳ ಬಳಿಕ ಜಠರ ಸಾಮಾನ್ಯವಾಗಿ, ಖಾಲಿ ಆಗುವುದು. (ನೋಡಿ- ಜಠರ)

ಚಿಕ್ಕ ಕರುಳು : ಜಠರದ ಪೈಲೋರಿಕ್ ಕೊನೆಯಲ್ಲಿ ಇದರ ಆರಂಭ; ಮತ್ತು ದೊಡ್ಡ ಕರುಳಿನ ಪ್ರಾರಂಭವಾದ ಸೀಕಮ್ ಎನ್ನುವಲ್ಲಿ ಕೊನೆ. ಚಿಕ್ಕ ಕರುಳಿನ ಉದ್ದ ಸುಮಾರು 6 ಮೀ. ಇದರ ಆದಿಭಾಗವಾದ ಮುಂಗುರುಳು (ಡುಯೋಡೀನಮ್) ಅತ್ಯಂತ ದೊಡ್ಡ ಗಾತ್ರದ್ದು. ಇದು ಉದರದ ಹಿಂದಿನ ಭಿತ್ತಿಗೆ ಅಂಟಿಕೊಂಡಿದೆ. ಇದರ ಉದ್ದ ಸುಮಾರು 25 ಸೆಂ.ಮೀ. ಆಕಾರ ಅಯಂತೆ ಉಂಟು. ಡುಯೋಡೀನಮಿನ ನಿಮ್ನತೆಯಲ್ಲಿ (ಕಾನ್‍ಕೇವಿಟಿ) ಮೇದೋಜೀರಕಾಂಗದ ಶಿರೋಭಾಗ ಅಡಕವಾಗಿದೆ. ಡುಯೋಡೀನಮನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದೆ. ಮೊದಲನೆಯ ವಿಭಾಗದ ಉದ್ದ 5 ಸೆಂ.ಮೀ. ಎರಡನೆಯದರ ಉದ್ದ 8 ಸೆಂ.ಮೀ. ಮೂರನೆಯದರ ಉದ್ದ 10 ಸೆಂ.ಮೀ. ಮತ್ತು ನಾಲ್ಕನೆಯದರ ಉದ್ದ 2-3 ಸೆಂ.ಮೀ. ಇವುಗಳ ಪೈಕಿ ಎರಡನೆಯದು ಊಧ್ರ್ವಗಾಮಿ. ಯಕೃತ್ತು (ಲಿವರ್) ಹಾಗೂ ಮೇದೋಜೀರಕಾಂಗದಿಂದ ಬರುವ ನಾಳಗಳು ಇಲ್ಲಿ ಚಿಕ್ಕಕರುಳನ್ನು ಸೇರುತ್ತವೆ. ಚಿಕ್ಕಕರುಳಿನ ಉಳಿದ ಭಾಗ ಮಿಸೆಂಟರಿ ಎಂಬ ಉದರದ ಒಳಪೊರೆ ಮಡಿಕೆಯಿಂದ ಉದರದ ಹಿಂದಿನ ಭಿತ್ತಿಗೆ ಸೇರಿಸಲ್ಪಟ್ಟಿದೆ. ಇದರ ಪೂರ್ವಭಾಗದ (ಅಂದರೆ ಪ್ರಾರಂಭದ ಸುಮಾರು 2/5 ಭಾಗ ಸುಮಾರು 2.4 ಮೀ.) ಹೆಸರು ನಡುಗರುಳು (ಜೆಜ್ಯೂನಮ್). ಇದರ ಭಿತ್ತಿ ಬಲು ದಪ್ಪ. ಒಳಪೊರೆಯ ಮಡಿಕೆಗಳು ಅಧಿಕ ರಕ್ತನಾಳಗಳೂ ಇದರಲ್ಲಿವೆ. ಸಣ್ಣ ಕರುಳಿನ ಉತ್ತರಭಾಗದ (ಅಂದರೆ ಅಂತ್ಯದ ಸುಮಾರು 3/5 ಭಾಗ = ಸುಮಾರು 3.6 ಮೀ.) ಹೆಸರು ಹಿಂಗರುಳು (ಐಲಿಯಮ್). ಇದರ ಭಿತ್ತಿ ತೆಳ್ಳಗಿದೆ. ಐಲಿಯಮಿನ ಕೊನೆಯ ಭಾಗದ ಒಳಪೊರೆಯಲ್ಲಿ ಮಡಿಕೆಗಳಿರುವುದಿಲ್ಲ. ಸಕ್ಕಸ್ ಎಂಟೆರಿಕಸ್ (ಕರುಳಿನ ರಸ) ಎಂಬ ದ್ರವವನ್ನು ಚಿಕ್ಕ ಕರುಳು ಸ್ರವಿಸುವುದು. ಇದು ಪಿತ್ತರಸ ಹಾಗೂ ಮೇದೋಜೀರಕಾಂಗದ ಸ್ರಾವಗಳೊಡನೆ ಮಿಶ್ರವಾಗುತ್ತದೆ. ಆಹಾರ ಜೀರ್ಣವಾಗಲು ಈ ಜೀರ್ಣರಸಗಳ ಮಿಶ್ರಣ ಬಲು ಅವಶ್ಯ. ಚಿಕ್ಕ ಕರುಳಿಗೆ ಇರುವ ಚಲನೆಗಳು ಎರಡು ಬಗೆಯವು- ಮುಂದೂಡಿಕೆ ಹಾಗೂ ಕಡೆತ. ಆಹಾರದ ಮೂರು ಅಂಶಗಳಾದ ಶರ್ಕರಪಿಷ್ಟಾದಿಗಳು, ಪ್ರೋಟಿನ್, ಕೊಬ್ಬು, ಇವೆಲ್ಲವುಗಳ ಅಂತಿಮ ಜೀರ್ಣಕ್ರಿಯೆ ಚಿಕ್ಕಕರುಳಿನಲ್ಲಿ ಸಾಗಿ ಫಲಿತ ಪದಾರ್ಥಗಳು ಹೀರಲ್ಪಡುತ್ತವೆ. ಜೀರ್ಣವಾಗದೆ ಮತ್ತು ಹೀರಲ್ಪಡದೆ ಈ ಐಲಿಯಮಿನಲ್ಲಿ ಉಳಿದಿರುವ ಶೇಷವಿನ್ನೂ ತರಲ (ಫ್ಲೂಯಿಡ್) ರೂಪದಲ್ಲಿರುತ್ತದೆ. ಮುಂದೆ ದೊಡ್ಡಕರುಳಿನ ಪ್ರಥಮ ಭಾಗವಾದ ಸೀಕಮ್ಮಿಗೆ ಇದರ ರವಾನೆಯಾಗುವುದು. ರವಾನೆದ್ವಾರಕ್ಕೆ ಐಲಿಯೋಸೀಕಲ್ ದ್ವಾರ ಎಂದು ಹೆಸರು. ಇದು ಐಲಿಯಮ್ ಮತ್ತು ಸೀಕಮುಗಳ ಸಂಧಿದ್ವಾರ. ಇಲ್ಲಿರುವ ಐಲಿಯೋಸೀಕಲ್ ಕವಾಟ ತರಲದ ಮುಂಚಲನೆಗೆ ಮಾತ್ರ ಅನುಮಾಡಿಕೊಡುವಂತಿದೆ. ಆದ್ದರಿಂದ ಒಮ್ಮೆ ಸಾಗಿದ ತರಲ ಐಲಿಯಮಿಗೆ ಹಿಂದೆ ಬರುವಂತಿಲ್ಲ.

ಯಕೃತ್ತು : ಇದು ದೇಹದ ಅತ್ಯಂತ ದೊಡ್ಡ ಗ್ರಂಥಿ. ಈಲಿ ಪರ್ಯಾಯ ಪದ. (ನೋಡಿ- ಈಲಿ). ಉದರದಮೇಲೆ ಬಲಭಾಗದಲ್ಲಿ ಇದರ ಸ್ಥಾನ. ಉದರದೊಳಗಿರುವ ಸಾಮಾನ್ಯ ಒತ್ತಡ ಮತ್ತು ಭಾಗಶಃ ನೀಚ (ಇನ್‍ಫೀರಿಯರ್) ವೀನಿಕೇವದೊಡನೆ ಹೆಪ್ಯಾಟಿಕ್ ಅಭಿಧಮನಿಗಳ ಕೂಡುವಿಕೆಯು ಸೇರಿ ಯಕೃತ್ತಿನ ನೆಲೆ ಭದ್ರವಾಗಿದೆ. ಇದರಿಂದ ಬಲ ಮತ್ತು ಎಡ ಯಕೃತ್ತಿನ ನಾಳಗಳು ಆರಂಭವಾಗಿ ಮುಂದೆ ಎರಡೂ ಕೂಡಿಕೊಂಡು ಯಕೃತ್ತಿನ ಸಾಮಾನ್ಯ ನಾಳ (ಕಾಮನ್ ಹೆಪ್ಯಾಟಿಕ ಡಕ್ಟ್) ಆಗುತ್ತದೆ. ಯಕೃತ್ತಿನ ಸಾರ್ವವಾದ ಪಿತ್ತರಸ (ಬೈಲ್) ನಿರಂತರವಾಗಿ ಈ ಸಾಮಾನ್ಯನಾಳದ ಮೂಲಕ ಪ್ರವಹಿಸುತ್ತಿರುವುದು. ಸೀಬೆ ಹಣ್ಣಿನ ಆಕಾರದ ಒಂದು ಚೀಲ. ಯಕೃತ್ತಿನ ಸಾಮಾನ್ಯನಾಳಕ್ಕೆ, ಸಿಸ್ಟ್ರಿಕ್ ನಾಳದಿಂದ ಬಂಧಿಸಲ್ಪಟ್ಟಿದೆ. ಈ ಚೀಲಕ್ಕೆ ಪಿತ್ತಕೋಶ (ಗಾಲ್ ಬ್ಲಾಡರ್) ಎಂದು ಹೆಸರು. ಯಕೃತ್ತಿನ ಸಾಮಾನ್ಯನಾಳ ಮತ್ತು ಸಿಸ್ಟ್ರಿಕ್ ನಾಳಗಳ ಸಂಧಿಸ್ಥಾನದಿಂದ ಕೆಳಗಿನ ನಾಳಕ್ಕೆ ಸಾಮಾನ್ಯ ಪಿತ್ತನಾಳವೆಂದು ಹೆಸರು. ಇದು ಮೇದೋಜೀರಕಾಂಗದ ನಾಳದ ಜೊತೆಯಲ್ಲಿ ಡುಯೋಡೀನಮಿನ ಎರಡನೆಯ ವಿಭಾಗದೊಳಕ್ಕೆ ತೆರೆದುಕೊಂಡಿದೆ. ಪಿತ್ತದ ಪ್ರಧಾನ ಘಟಕಗಳೆಂದರೆ ಪಿತ್ತ ವರ್ಣಕಗಳು ಹಾಗೂ ಪಿತ್ತಲವಣಗಳು. ಪಿತ್ತಕೋಶವು ಪಿತ್ತವನ್ನು ಶೇಖರಿಸಿ ಸಾರಗೊಳಿಸುತ್ತದೆ (ಕಾನ್ಸೆಂಟ್ರೇಟ್ಸ್), ಭಾಗಶಃ ಜೀರ್ಣವಾದ ಆಹಾರ ಕರುಳಿನೊಳಕ್ಕೆ ಪ್ರವೇಶಿಸಿದಾಗ ಡುಯೋಡೀನಮ್ಮಿನ ಒಳಪೊರೆಯಿಂದ ಕೊಲಿಸ್ಟೋಕೈನಿನ್ ಎಂಬ ಹಾರ್ಮೊನ್ ಉತ್ಪತ್ತಿ ಆಗುವುದು. ಇದರ ಪ್ರಭಾವದಿಂದ ಪಿತ್ತಕೋಶ ಸಂಕುಚಿಸಿ ಸಂಗ್ರಹಿತ ಪಿತ್ತವನ್ನು ಹೊರಹಾಕಿ ಖಾಲಿ ಆಗುತ್ತದೆ. ಯಕೃತ್ತಿನಿಂದ ವಿಸರ್ಜಿಸಲ್ಪಡುವ ಹೀಮೊಗ್ಲೋಬಿನ್ ಚಯಾಪಚಯದ ಉತ್ಪನ್ನಗಳೇ ಪಿತ್ತವರ್ಣಕಗಳು. ದೇಹದಲ್ಲಿ ಇವುಗಳ ಅಧಿಕ ದಾಸ್ತಾನು ಕಾಮಾಲೆ ರೋಗವಾಗಿ ಪ್ರಕಟವಾಗುವುದು. ಪಿತ್ತಲವಣಗಳು ಆಹಾರದಲ್ಲಿನ ಕೊಬ್ಬನ್ನು ಕರಗಿಸಿ ಎಮಲ್ಷನ್ ರೂಪಕ್ಕೆ ತರಲು ನೆರವಾಗುತ್ತವೆ. ಎಮಲ್ಷನ್ ರೂಪದ ಮೇಲೆ ಮೇದೋಜೀರಕಾಂಗದ ಲೈಪೇಸ್ ವರ್ತಿಸಬಲ್ಲುದು. ಅಪಸಾಮಾನ್ಯ ಪರಿಸ್ಥಿತಿಗಳಲ್ಲಿ ಪಿತ್ತದ ಘಟಕಗಳು ಅವಕ್ಷೇಪನಗೊಂಡು (ಪ್ರೆಸಿಪಿಟೇಟ್) ಪಿತ್ತಶಿಲೆಗಳಾಗುವ (ಗಾಲ್‍ಸ್ಟೋನ್ಸ್) ಸಂಭಾವ್ಯತೆ ಉಂಟು. ವ್ಯಕ್ತಿ ಬದುಕಿರಲು ಯಕೃತ್ತು ತೀರ ಅವಶ್ಯ. ಇದರ ಸುಪ್ತಸಾಮಥ್ರ್ಯ ಅಗಾಧ. ಎಷ್ಟೆಂದರೆ ಆರೋಗ್ಯಸ್ಥಿತಿಯಲ್ಲಿರುವ ಯಕೃತ್ತಿನ 1/5 ರಷ್ಟು ಊತಕಾಂಶವೂ ಬದುಕು ಮುಂದುವರಿಯಲು ಸಾಕು. ಪಿತ್ತರಸವನ್ನು ಸ್ರವಿಸುವುದರ ಜೊತೆಗೆ ಯಕೃತ್ತು ಇತರ ಪ್ರಮುಖ ಪಾತ್ರಗಳನ್ನು ಕೂಡ ನಿರ್ವಹಿಸುತ್ತದೆ-ವಿಷವಸ್ತುಗಳ ನಂಜು ಹರಣ, ಪ್ರೋಟೀನ್ ಸಂಶ್ಲೇಷಣೆ, ಗ್ಲೂಕೋಸನ್ನು ಗ್ಲೈಕೊಜೆನ್ನಿಗೆ ಪರಿವರ್ತಿಸಿ ಸಂಗ್ರಹಣೆ ಇತ್ಯಾದಿ. ಕಬ್ಬಿಣ ಹಾಗೂ ತಾಮ್ರ ಲೋಹಗಳನ್ನು ಕೂಡ ಇದು ಸಂಗ್ರಹಿಸಿಡುವುದು. ಜೀವಸತ್ವ ಂ ತಯಾರಾಗುವುದು ಯಕೃತ್ತಿನಲ್ಲೇ.

ಮೇದೋಜೀರಕಾಂಗ : ಬಹಿಸ್ರಾವ ಮತ್ತು ಅಂತಃಸ್ರಾವಗಳೆರಡೂ ಇರುವ ಗ್ರ್ರಂಥಿ (ಪ್ಯಾಂಕ್ರಿಯಾಸ್). ಇದು ಮೃದು ಹಾಗೂ ಬಹುಪಟಲಯುಕ್ತ ಗ್ರಂಥಿ. ಇದರ ಬಣ್ಣ ಮಾಸಲು ಕೆಂಪು. ಇದು ಉದರದೊಳಗೆ ಜಠರದ ಹಿಂಭಾಗದಲ್ಲಿ ಮೊದಲನೆಯ ಉಪಕಶೇರುಮಣಿಯ ಮುಂಡದ ಮೇಲೆ ಡುಯೋಡೀನಮ್ಮಿಗೂ ಗುಲ್ಮಕ್ಕೂ ನಡುವೆ ಉಂಟು. ಇದರ ಬಹಿಸ್ರಾವ ಮೇದೋಜೀರಕರಸ. ಮುಖ್ಯನಾಳ ಮತ್ತು ಉಪನಾಳಗಳೆಂಬ ಎರಡು ನಾಳಗಳ ಮೂಲಕ ಈ ರಸ ಡುಯೋಡೀನಮ್ಮಿನೊಳಕ್ಕೆ ಸುರಿಯುತ್ತದೆ. ಮುಖ್ಯನಾಳ ಡುಯೋಡೀನಮ್ಮಿನೊಳಗೆ ತೆರೆದುಕೊಳ್ಳುವುದಕ್ಕೆ ಮೊದಲು ಪಿತ್ತರಸನಾಳವನ್ನು ಸೇರಿಕೊಳ್ಳುವುದು. ಉಪನಾಳವಾದರೊ ಇದಕ್ಕಿಂತ 2 ಸೆಂ.ಮೀ ಮೇಲುಗಡೆ ಪ್ರತ್ಯೇಕವಾಗಿ ತೆರೆದುಕೊಳ್ಳುತ್ತದೆ. ಅಮೈಲೇಸ್, ಟ್ರಿಪ್ಸಿನ್, ಲೈಪೇಸ್ ಎಂಬ ಎನ್‍ಜೈಮುಗಳು ಮೇದೋಜೀರಕರಸದಲ್ಲಿವೆ. ಇವು ಅನುಕ್ರಮವಾಗಿ ಶರ್ಕರಪಿಷ್ಟಾದಿಗಳು, ಪ್ರೋಟೀನ್, ಕೊಬ್ಬುಗಳನ್ನು ಜೀರ್ಣಮಾಡುತ್ತವೆ. ಮೇದೋಜೀರಕಾಂಗದ ಮುಖ್ಯ ಅಚಿತಃ ಸ್ರಾವವೆಂದರೆ ರಕ್ತಶರ್ಕರದ ಚಯಾಪಚಯಕ್ಕೆ ಅತ್ಯವಶ್ಯವಾದ ಇನ್ಸುಲಿನ್. ಇದರ ಸ್ರವನಲೋಪ ಮಧುಮೇಹ ರೋಗವನ್ನು ಉಂಟುಮಾಡುವುದು (ನೋಡಿ- ಮೇದೋಜೀರಕಾಂಗ).
ದೊಡ್ಡಕರುಳು : ಚಿಕ್ಕಕರುಳಿನ ಕೊನೆಯಲ್ಲಿ ಸೀಕಮ್ ಉಂಟು. ಇದೇ ದೊಡ್ಡಕರುಳಿನ ಆರಂಭ. ಸೀಕಮ್ಮಿನ ಭಿತ್ತಿಯ ಒಳಮಡಚುವಿಕೆಯಿಂದ ಸೃಷ್ಟಿಯಾದ ಐಲಿಯೋಸೀಕಲ್ ಕವಾಟದ ಸಮೇತ ಇರುವ ಅದೇ ಹೆಸರಿನ ದ್ವಾರ ಐಲಿಯಮ್ಮಿಗೂ ದೊಡ್ಡ ಕರುಳಿಗೂ ನಡುವೆ ಉಂಟೆಂಬುದನ್ನು ಈಗಾಗಲೇ ಹೇಳಿದೆ. ಇದೇ ಸ್ಥಳದಲ್ಲಿ ಸೀಕಮ್ಮಿಗೆ ಸೇರಿದಂತೆ ಸಣ್ಣ ಜಂತುಹುಳುವಿನ ಆಕಾರದ ಅಪೆಂಡಿಕ್ಸ್ ಇದೆ. ಸೀಕಮ್ಮಿನಿಂದ ಮುಂದಕ್ಕೆ ಅನುಕ್ರಮವಾಗಿ ಏರು (ಅಸೆಂಡಿಂಗ್), ಅಡ್ಡ (ಟ್ರಾನ್ಸ್ ವರ್ಸ್), ಇಳಿ (ಡಿಸೆಂಡಿಂಗ್) ಮತ್ತು ಕಿಬ್ಬೊಟ್ಟೆ (ಪೆಲ್ವಿಕ್) ದೊಡ್ಡಕರುಳುಗಳಿವೆ. ಕಿಬ್ಬೊಟ್ಟೆ, ದೊಡ್ಡಗರುಳಿನಿಂದ ಮುಂದಕ್ಕೆ ಮಲಕೋಶ (ರೆಕ್ಟಮ್) ಉಂಟು. ಇಲ್ಲಿ ದೊಡ್ಡಕರುಳು ಅಂತ್ಯವಾಗುವುದು. ಮಲಕೋಶ ಗುದನಾಳಕ್ಕೆ ತೆರೆದುಕೊಂಡಿದೆ. ಗುದನಾಳ ದೇಹದ ಹೊರ ಮೈಯಲ್ಲಿ ಕೊನೆಗೊಳ್ಳುವುದು. ಗುದನಾಳದ ಉದ್ದ 3.8 ಸೆಂ.ಮೀ.

ದೊಡ್ಡಕರುಳಿನ ಉದ್ದ ಸುಮಾರು 1.5 ಮೀ. ಇದು ಸಣ್ಣಕರುಳಿಗಿಂತ ದಪ್ಪವಾಗಿದೆ. ಟೇನಿಯಾಕಾಲೈ ಎಂಬ ಹೆಸರಿನ ನೀಳಸ್ನಾಯುವಿನ ಪಟ್ಟೆಗಳು ದೊಡ್ಡ ಕರುಳಿನ ಹೊರಮೈಯ ಬಹುಭಾಗವನ್ನು ಆವರಿಸಿವೆ. ಇವು ಗಿಡ್ಡವಾಗಿ ಬಿಗಿಯಾಗಿ ಇರುವುದರಿಂದ ದೊಡ್ಡಕರುಳು ಮಡಿಕೆ ಮಡಿಕೆ ಆಕಾರ ಪಡೆದಿದೆ. ಜೀರ್ಣಕ್ರಿಯೆ ಮುಗಿದ ಬಳಿಕ ಉಳಿಯುವ ಶೇಷವೇ ಮಲ. ಇದು ತರಲ ರೂಪದಲ್ಲಿ ದೊಡ್ಡಕರುಳನ್ನು ತಲಪುವುದು. ದೊಡ್ಡಕರುಳಿನ ಪೂರ್ವಾರ್ಧ ಈ ತರಲದಿಂದ ನೀರನ್ನು ಹೀರಿಕೊಂಡು ಗಟ್ಟಿ ಪದಾರ್ಥವನ್ನು ಮಲಕೋಶಕ್ಕೆ ರವಾನಿಸುತ್ತದೆ. ದೊಡ್ಡಕರುಳಿಗೆ ಇರುವ ವಿಶೇಷ ಚಲನೆಗಳ ಪರಿಣಾಮವಾಗಿ ಪೂರ್ವಾರ್ಧದಲ್ಲಿ ನೀರಿನ ಹೀರಿಕೆ ಹಾಗೂ ಮಲದ ಮುಂದೂಡಿಕೆ ಮತ್ತು ಉತ್ತರಾರ್ಧದಲ್ಲಿ ಮಲದ ಉಚ್ಛಾಟನೆ ಸಾಧ್ಯವಾಗುವುದು. ಆಗ ಗುದನಾಳದ ಒಳ ಬಾಯಿ ಸಡಿಲವಾಗಿ, ಸಾಮಾನ್ಯವಾಗಿ ವ್ಯಕ್ತಿಯ ಇಚ್ಛೆಯ ಪ್ರಕಾರ, ಮಲ ವಿಸರ್ಜನೆ ನಡೆಯುತ್ತದೆ. ಇದರೊಂದಿಗೆ ಜೀರ್ಣಕ್ರಿಯೆ ಪೂರ್ಣವಾಗುವುದು.			 (ನೋಡಿ- ದೊಡ್ಡ-ಕರುಳು)

 (ಎಲ್.ಎಸ್.ಆರ್.)g
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ